ಉಳಿತಾಯ ಬ್ಯಾಂಕು

	ಸೂಕ್ತ ಬಡ್ಡಿದರಗಳ ಸಣ್ಣ ಠೇವಣಿಗಳನ್ನು ಸ್ವೀಕರಿಸುವ ಸಂಸ್ಥೆ (ಸೇವಿಂಗ್ಸ್ ಬ್ಯಾಂಕ್). ಹೀಗೆ ಮಾಡಿದ ಠೇವಣಿಯ ಹಣವನ್ನು ಕೆಲವು ನಿಬಂಧನೆಗಳಿಗೆ ಅನುಗುಣವಾಗಿ ಹಿಂದಕ್ಕೆ ತೆಗೆದುಕೊಳ್ಳುವ ಅವಕಾಶವಿರುತ್ತದೆ. ಭವಿಷ್ಯದಲ್ಲಿ ವೆಚ್ಚಮಾಡುವ ಉದ್ದೇಶದಿಂದ ಹಣ ಕೂಡಿಡುವವರಿಗೆ ಇದೊಂದು ಸಾಧನವಾಗಿ ಪರಿಗಣಿತವಾಗಿದೆಯಾದರೂ ಉಳಿತಾಯ ಸಂಗ್ರಹವೊಂದೇ ಇದರ ಕಾರ್ಯಭಾರವಲ್ಲ. ಇದು ಈ ಹಣವನ್ನು ಇತರರಿಗೆ ಸಾಲವಾಗಿ ಕೊಡುವ ಕೆಲಸವನ್ನೂ ನಿರ್ವಹಿಸುತ್ತದೆ. ಆದ್ದರಿಂದ ಇದು ಅರ್ಥವ್ಯವಸ್ಥೆಯಲ್ಲಿನ ಒಂದು ಮುಖ್ಯ ಕೊಂಡಿ. ಇದು ಸಾಲ ಕೊಡುವವರಿಗೂ ಸಾಲ ಪಡೆಯುವವರಿಗೂ ಸಂಬಂಧ ಕಲ್ಪಿಸುತ್ತದೆ. ಸಾಲ ನೀಡುವ ಕೆಲಸವನ್ನೂ ಇದು ಮಾಡದಿದ್ದರೆ ಇದು ಈ ರೂಪದಲ್ಲಿ ಉಳಿಯುವುದೇ ಸಾಧ್ಯವಿರುತ್ತಿರಲಿಲ್ಲ. ಅನುಭೋಗವನ್ನು ಮೊಟಕುಮಾಡಿ ಉಳಿತಾಯ ಮಾಡಬಯಸುವವರಿಂದ ಹಣ ಪಡೆದು, ಹೆಚ್ಚು ವೆಚ್ಚ ಮಾಡಬಯಸುವವರಿಗೆ ಹಣ ನೀಡುವ ಈ ಸಂಸ್ಥೆಯ ಪಾತ್ರ ಇಂದಿನ ವ್ಯವಸ್ಥೆಯಲ್ಲಿ ಬಲು ಉಪಯುಕ್ತವಾದದ್ದು. ಅನುಭೋಗಕ್ಕಾಗಿ ವಿನಿಯೋಗವಾಗಬಹುದಾಗಿದ್ದ ಆರ್ಥಿಕ ಸಾಧನಗಳಲ್ಲಿ ಒಂದು ಭಾಗವನ್ನು ಬಂಡವಾಳ ಶೇಖರಣೆಯತ್ತ ತಿರುಗಿಸುವ ಹೊಣೆ ಈ ಸಂಸ್ಥೆಯದು.

	ಉಳಿತಾಯ ಬ್ಯಾಂಕಿನಂತೆ ಇನ್ನೂ ಅನೇಕ ಸಂಸ್ಥೆಗಳು ಇಂಥದೇ ಕಾರ್ಯ ನಿರ್ವಹಿಸುತ್ತವೆ. ವಾಣಿಜ್ಯ ಬ್ಯಾಂಕುಗಳ ಉಳಿತಾಯ ವಿಭಾಗಗಳೂ ಗೃಹನಿರ್ಮಾಣ ಸಾಲಸಂಘಗಳು, ಉಳಿತಾಯ ಸಾಲ ಸಂಘಗಳು, ನಿಯೋಜನ ಸಂಸ್ಥೆಗಳೇ ಮುಂತಾದವೂ ಸಹಕಾರ ಸಂಘಗಳೂ ನಾನಾ ಸಂಸ್ಥೆಗಳು ನಿರ್ವಹಿಸುತ್ತಿರುವ ಉಳಿತಾಯ ಯೋಜನೆಗಳೂ ಕೆಲವು ಉದಾಹರಣೆಗಳು.

	ಉಳಿತಾಯ ಬ್ಯಾಂಕುಗಳ ಸ್ಥಾಪನೆಗೆ ಇತಿಹಾಸದ ಕೆಲವು ಶಕ್ತಿ-ಪ್ರವೃತಿಗಳು ಕಾರಣ. ಅರ್ಥವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮಗೆ ಅಗತ್ಯವಾದ ಎಲ್ಲವನ್ನೂ ತಾವೇ ಉತ್ಪಾದಿಸುವುದರ ಬದಲು ತಮಗೆ ಯಾವುದರಲ್ಲಿ ಹೆಚ್ಚು ನೈಪುಣ್ಯವಿದೆಯೋ ಅಂಥ ಕಾರ್ಯದಲ್ಲಿ ಮಾತ್ರ ನಿರತರಾಗುವುದು ಸಾಧ್ಯವಾದದ್ದು ಪದಾರ್ಥ ವಿನಿಯಯ ವ್ಯವಸ್ಥೆಯಿಂದ. ಇದಕ್ಕೆ ಅನುವಾಗಿ ಒದಗಿದ್ದೇ ಹಣದ ವ್ಯವಸ್ಥೆ. ಹಣದ ಸರಬರಾಯಿ ಸುಸೂತ್ರವಾಗಿ ನಡೆಯುವ ಹಾಗೆ ನೋಡಿಕೊಳ್ಳುವ ನಾನಾ ಉದ್ದರಿ ಸಂಸ್ಥೆಗಳು ಹುಟ್ಟಿಕೊಂಡವು. ಇವುಗಳಲ್ಲಿ ಉಳಿತಾಯ ಬ್ಯಾಂಕೂ ಒಂದು.

	ಬಂಡವಾಳ ವ್ಯವಸ್ಥೆಯಲ್ಲಿ ಪ್ರತಿಯೊಬ್ಬನಿಗೂ ತನಗೆ ತಾನೇ ಹೊಣೆಗಾರನಾಗುವುದು ಅನಿವಾರ್ಯ. ಅನಿಶ್ಚಿತ ಪರಿಸ್ಥಿತಿಗಳಿಗಾಗಿ ಭವಿಷ್ಯದಲ್ಲಿ ಆಗಿಂದಾಗ್ಗೆ ಸಂಭವಿಸುವ ಕಷ್ಟನಷ್ಟಗಳಲ್ಲಿ ಕೈಗಾವಾಲಾಗಿರಲು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದುಡಿಮೆಯಿಂದ ಗಳಿಸಿದ ವರಮಾನದಲ್ಲಿ ಸ್ವಲ್ಪ ಭಾಗವನ್ನು ಕ್ರಮವಾಗಿ ಉಳಿಸಿ ಕೂಡಿಡುವ ಅಗತ್ಯ ವ್ಯಕ್ತವಾಯಿತು. ಇಂಥ ಸ್ವಾವಲಂಬಿ ವ್ಯಕ್ತಿಗೆ ಉಳಿತಾಯ ಬ್ಯಾಂಕು ನೆರವಾಗುತ್ತದೆ.

	ಉಳಿತಾಯ ಸಂಸ್ಥೆಗಳ ಸ್ಥಾಪನೆಯ ಅವಶ್ಯಕತೆಯನ್ನು ಕುರಿತು ಮೊಟ್ಟಮೊದಲಿಗೆ ತರ್ಕಬದ್ಧವಾಗಿ ವಾದಿಸಿದ ಕೀರ್ತಿ ಹ್ಯೂಗ್ಸ್‍ದ ಲೆಸ್ತರ್ ಎಂಬ ಫ್ರೆಂಚ್ ಪ್ರಜೆಗೆ ಸಲ್ಲುತ್ತದೆ. ಬಡವರ ಸ್ಥಿತಿ ಸುಧಾರಿಸುವಂತೆಯೂ ಶ್ರೀಮಂತರು ಭಿಕ್ಷೆ ನೀಡುವಂಥ ಪ್ರಸಂಗ ಬಾರದಂತೆಯೂ ಮಾಡಲು ಇವು ಅಗತ್ಯವೆಂದು ಆತ ವಾದಿಸಿದ. 17ನೆಯ ಶತಮಾನದ ಇಂಗ್ಲಿಷ್ ಬರೆಹಗಾರ ಡೇನಿಯಲ್ ಡೆಪೋ ಕೂಡ ಮಿತವ್ಯಯದ ಅನುಕೂಲಗಳ ಬಗ್ಗೆ ಒಂದು ದೊಡ್ಡ ಲೇಖನವನ್ನೇ ಬರೆದ. ಫ್ರೆಂಚರೂ ಇಂಗ್ಲಿಷರೂ ಉಳಿತಾಯದ ಬಗ್ಗೆ ಬರೆವಣಿಗೆಯ ಕಾರ್ಯದಲ್ಲಿ ನಿರತರಾಗಿದ್ದಾಗ ಯೂರೋಪಿನ ಇತರ ದೇಶಗಳಲ್ಲಿ ಪೌರಸಭಾ ಗಿರವಿಯಂಗಡಿಗಳಲ್ಲಿ ಉಳಿತಾಯ ಬ್ಯಾಂಕುಗಳ ಉದ್ಭವವಾಗುತ್ತಿತ್ತು. ಪೌರಸಭಾ ಉಳಿತಾಯ ಬ್ಯಾಂಕುಗಳು ಹುಟ್ಟಿದ್ದು ಹೀಗೆಯೇ. ಬಹುಶಃ ಇದೇ ಕಾಲಕ್ಕೆ ಜರ್ಮನಿಯಲ್ಲಿ ಖಾಸಗಿ ಉಳಿತಾಯ ಬ್ಯಾಂಕುಗಳು ಜನಿಸಿದವು. ಇವುಗಳಲ್ಲಿ ಮೊದಲನೆಯದರ ಜನ್ಮವಾದದ್ದು ಹ್ಯಾಂಬರ್ಗಿನಲ್ಲಿ (1778).
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ : 	ವಲಸೆಗಾರರಲ್ಲಿ ಮಿತವ್ಯಯ ಮತ್ತು ಸ್ವಾವಲಂಬನೆ ಪ್ರವೃತ್ತಿಗೆ ಉತ್ತೇಜನ ಕೊಡಲು ಕೆಲವು ಉಪಕಾರ ಮನೋಭಾವದ ವ್ಯಕ್ತಿಗಳು 19ನೆಯ ಶತಮಾನದ ಪ್ರಾರಂಭದಲ್ಲಿ ಉಳಿತಾಯ ಬ್ಯಾಂಕುಗಳನ್ನು ಸ್ಥಾಪಿಸಿದರು. ಇಂದು ಅಲ್ಲಿ ಪರಸ್ಪರ (ಮ್ಯೂಚ್ಯುಯಲ್) ಉಳಿತಾಯ ಬ್ಯಾಂಕುಗಳೂ ಅಂಚೆ ಉಳಿತಾಯ ವ್ಯವಸ್ಥೆಯೂ ವಾಣಿಜ್ಯ ಬ್ಯಾಂಕುಗಳ ಉಳಿತಾಯ ಠೇವಣಿ ಇಲಾಖೆಗಳೂ ಈ ಕೆಲಸ ನಿರ್ವಹಿಸುತ್ತಿವೆ. ಪರಸ್ಪರ ಉಳಿತಾಯ ಬ್ಯಾಂಕುಗಳು ಸಾರ್ವಜನಿಕರಿಂದ ಉಳಿತಾಯ ಠೇವಣಿ ಸ್ವೀಕರಿಸಿ ನಿರ್ದಿಷ್ಟವಾದ ಮತ್ತು ಸುರಕ್ಷಿತವಾದ ಕ್ಷೇತ್ರಗಳಲ್ಲಿ ಬಂಡವಾಳ ಹೂಡುತ್ತವೆ. ಬಂದ ಲಾಭವನ್ನು ಠೇವಣಿದಾರರಿಗೆ ಹಂಚಲಾಗುತ್ತದೆ. ಇಲ್ಲಿ ಷೇರುದಾರರು ಇಲ್ಲವಾದ್ದರಿಂದ, ಖರ್ಚು ಕಳೆದು ಉಳಿದ ಆದಾಯವನ್ನು ಠೇವಣಿದಾರರಿಗೆ ಬಡ್ಡಿಯ ರೂಪದಲ್ಲಿ ಹಂಚಲಾಗುತ್ತದೆ. ಉಳಿತಾಯಕ್ಕೆ ಪ್ರೋತ್ಸಾಹ ನೀಡಿ, ಇದನ್ನು ಉಪಯುಕ್ತವೂ ಲಾಭದಾಯಕವೂ ಸುರಕ್ಷಿತವೂ ಆದ ರೀತಿಯಲ್ಲಿ ಬಂಡವಾಳವಾಗಿ ನಿಯೋಜಿಸುವುದರಲ್ಲಿ ಇವುಗಳು ವಹಿಸಿರುವ ಪಾತ್ರ ಪ್ರಮುಖವಾದದ್ದು. ಆ ದೇಶದಲ್ಲಿ ಅಂಚೆಯ ಉಳಿತಾಯ ವ್ಯವಸ್ಥೆ ಪ್ರಾರಂಭವಾದದ್ದು 1910ರಲ್ಲಿ. ವಾಣಿಜ್ಯ ಬ್ಯಾಂಕುಗಳೂ ಉಳಿತಾಯ ಠೇವಣಿ ಸ್ವೀಕರಿಸುತ್ತವೆ.

ಇಂಗ್ಲೆಂಡಿನಲ್ಲಿ :ಪ್ರಥಮ ಉಳಿತಾಯ ಬ್ಯಾಂಕು ಪ್ರಾರಂಭವಾದದ್ದು ರೂತ್‍ವೆಲ್ಲಿಯಲ್ಲಿ (1810). ಈ ಬ್ಯಾಂಕುಗಳು ಸ್ವೀಕರಿಸಿದ ಠೇವಣಿಯನ್ನು ಸರ್ಕಾರಿ ಸಾಲ ಪತ್ರಗಳಲ್ಲಿ ನಿಯೋಜಿಸುತ್ತವೆ. ಈ ಬ್ಯಾಂಕುಗಳ ಆಡಳಿತವನ್ನು ನ್ಯಾಸಧಾರಿಗಳು (ಟ್ರಸ್ಟೀಸ್) ನೋಡಿಕೊಳ್ಳುತ್ತಾರೆ. ಇವರು ಯಾವ ಸಂಭಾವನೆಯನ್ನೂ ಸ್ವೀಕರಿಸುವುದಿಲ್ಲ. ಠೇವಣಿ ಹಣಕ್ಕೆ ಬಡ್ಡಿ ದೊರೆಯುತ್ತದೆ.

	ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳ ಬೆಳೆವಣಿಗೆಯಾದದ್ದು 1861 ರಿಂದ ಈಚೆಗೆ. ಇವು ಉಳಿತಾಯಗಾರರಿಂದ ಠೇವಣಿ ಸ್ವೀಕರಿಸುವುದಲ್ಲದೆ ರಾಷ್ಟ್ರೀಯ ಉಳಿತಾಯ ಪತ್ರಗಳನ್ನೂ ರಾಷ್ಟ್ರೀಯ ಅಭಿವೃದ್ಧಿ ಬಾಂಡುಗಳನ್ನೂ ಮಾರಾಟ ಮಾಡುತ್ತವೆ.

ಭಾರತದಲ್ಲಿ :	ಬ್ಯಾಂಕುಗಳ ಬೆಳೆವಣಿಗೆಯಾದದ್ದು ಇತ್ತೀಚೆಗೆ. 19ನೆಯ ಶತಮಾನದಲ್ಲಿ ಭಾರತದ ಕೆಲವು ನಗರಗಳಲ್ಲಿ ಮಾತ್ರವೇ ಬ್ಯಾಂಕುಗಳಿದ್ದುದರಿಂದ ಇವುಗಳ ವ್ಯವಹಾರ ಬಹಳ ಮಂದಿಗೆ ತಿಳಿದೇ ಇರಲಿಲ್ಲ. ಇದರಿಂದಾಗಿ ಅನೇಕರು ತಾವು ಉಳಿಸಿದ ಹಣವನ್ನು ಬಚ್ಚಿಡುತ್ತಿದ್ದರು; ಅಥವಾ ಅದನ್ನು ಚಿನ್ನ ಬೆಳ್ಳಿಗಳ ರೂಪದಲ್ಲಿ ಇಡುತ್ತಿದ್ದರು. ಕಾನೂನು ಮತ್ತು ರಕ್ಷಣೆಯ ವ್ಯವಸ್ಥೆ ದೇಶದಲ್ಲಿ ಅಷ್ಟೇನೂ ಪ್ರಬಲವಾಗಿಲ್ಲದ್ದರ ಕಾರಣ ವ್ಯಕ್ತಿಗಳ ಜೀವ ಮತ್ತು ಆಸ್ತಿಗೆ ಸಾಕಷ್ಟು ಭದ್ರತೆ ಇರಲಿಲ್ಲ. ಆಗ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಆರ್ಥಿಕ ಅಭಿವೃದ್ಧಿಗೂ ಆಡಳಿತ ಮತ್ತು ರಕ್ಷಣಾ ವೆಚ್ಚಕ್ಕೂ ಹಣದ ಅವಶ್ಯಕತೆ ಕಂಡುಬಂದಿತ್ತು. ಇಂಥ ಸನ್ನಿವೇಶದಲ್ಲಿ ಅಲ್ಪ ಉಳಿತಾಯಕ್ಕೆ ಉತ್ತೇಜನ ನೀಡಿ ಅದನ್ನು ಉಪಯುಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಆಲೋಚಿಸಿ ಉಳಿತಾಯ ಬ್ಯಾಂಕುಗಳ ಸ್ಥಾಪನೆಗೆ ಗಮನ ಕೊಡಲಾಯಿತು. ಸರ್ಕಾರದ ಆದೇಶದ ಮೇರೆಗೆ ಕಲ್ಕತ್ತ, ಮದರಾಸು ಮತ್ತು ಬೊಂಬಾಯಿ ಪ್ರೆಸಿಡೆನ್ಸಿ ಬ್ಯಾಂಕುಗಳು 1833, 1834 ಮತ್ತು 1835ರಲ್ಲಿ ಉಳಿತಾಯ ಸೌಕರ್ಯವನ್ನೊದಗಿಸಲು ಪ್ರಾರಂಭಿಸಿದವು. ಜನರ ಉಳಿತಾಯ ಸಂಗ್ರಹಿಸುವ ಸಲುವಾಗಿ 1870ರಲ್ಲಿ ದೇಶದ ನಾನಾ ಭಾಗಗಳಲ್ಲಿ (ಮದ್ರಾಸು, ಬೊಂಬಾಯಿ ಮತ್ತು ಕಲ್ಕತ್ತ ಬಿಟ್ಟು) ಜಿಲ್ಲಾ ಉಳಿತಾಯ ಬ್ಯಾಂಕುಗಳು ಮೊದಲಾದವು. ಈ ಬ್ಯಾಂಕುಗಳ ಠೇವಣಿಯ ಗರಿಷ್ಠ ಮಿತಿಯನ್ನು 3,000 ರೂ. ಗಳಿಂದ 5,000 ರೂ.ಗಳಿಗೆ ಹೆಚ್ಚಿಸಿದ್ದು 1874ರಲ್ಲಿ. ಅಂಚೆ ಕಚೇರಿಗಳಲ್ಲೂ ಉಳಿತಾಯ ಬ್ಯಾಂಕುಗಳನ್ನು ಸ್ಥಾಪನೆ ಮಾಡುವುದರ ಬಗ್ಗೆ ಆಲೋಚನೆ ನಡೆದದ್ದು ಈ ಕಾಲದಲ್ಲೇ. ಇವು ಇಂಗ್ಲೆಂಡಿನ ಬ್ಯಾಂಕುಗಳ ಮಾದರಿಯಲ್ಲೇ ಸ್ಥಾಪಿತವಾದವು (1882). 1886ರಲ್ಲಿ ಜಿಲ್ಲಾ ಉಳಿತಾಯ ಬ್ಯಾಂಕುಗಳನ್ನು ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳೊಡನೆ ವಿಲೀನಗೊಳಿಸಲಾಯಿತು.

	ಭಾರತದಲ್ಲಿ ಉಳಿತಾಯ ಬ್ಯಾಂಕುಗಳ ಪ್ರಗತಿಗೆ ಅಡ್ಡಿಯಾಗಿರುವ ಅಂಶಗಳು ಅನೇಕ. ಕಳೆದ ಎರಡು ಮಹಾಯುದ್ಧಗಳ ಕಾಲದಲ್ಲಿ ಅನೇಕ ಠೇವಣಿದಾರರು ತಮ್ಮ ಹಣ ಹಿಂತೆಗೆದುಕೊಂಡರು. ಭದ್ರತೆಯ ಭರವಸೆ ಕಡಿಮೆಯಾದದ್ದೂ ಹಣದ ಮೌಲ್ಯದಲ್ಲಿ ವ್ಯತ್ಯಾಸವಾದದ್ದೂ ಇದಕ್ಕೆ ಕಾರಣ. 1914ರ ಪ್ರಾರಂಭದಲ್ಲಿ ಉಳಿತಾಯ ಬ್ಯಾಂಕುಗಳ ಠೇವಣಿಯ ಮೊತ್ತ 24 ಕೋಟಿ ರೂ. ಇದ್ದದ್ದು ಆ ವರ್ಷದ ಕೊನೆಯ ವೇಳೆಗೆ ಅದು 15 ಕೋಟಿ ರೂ. ಗಳಿಗೆ ಇಳಿಯಿತು. ಎರಡನೆಯ ಮಹಾಯುದ್ಧ ಕಾಲದಲ್ಲಿ ಕೇವಲ ಎರಡೇ ವರ್ಷಗಳಲ್ಲಿ ಠೇವಣಿಗಳ ಮೊತ್ತ 81 ಕೋಟಿ ರೂ.ಗಳಿಂದ 59 ಕೋಟಿ ರೂ.ಗಳಿಗೆ ಇಳಿಯಿತು. ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಉಳಿತಾಯಗಾರರು ಹಣವನ್ನು ಬ್ಯಾಂಕಿನಲ್ಲಿಡುವ ಬೈತಿಡುವ ಪ್ರವೃತ್ತಿಗೆ ಬಲಿಯಾಗುವುದುಂಟು. 1926ರ ಆರ್ಥಿಕ ಕುಸಿತದ ಕಾಲದಲ್ಲಿ ಬ್ಯಾಂಕುಗಳ ಠೇವಣಿಯ ಮೊತ್ತ ಗಣನೀಯವಾಗಿ ಕಡಿಮೆಯಾಯಿತು. ಕ್ಷಾಮ ಸಂಭವಿಸಿದಾಗಿನ ಅನುಭವವೂ ಇದೇ ಬಗೆಯದು. ದೇಶದ ವಿಭಜನೆಯ ಕಾಲದಲ್ಲೂ ಬ್ಯಾಂಕು ಠೇವಣಿಗಳಿಗೆ ಬಲವಾದ ಪೆಟ್ಟು ಬಿತ್ತು. ಅಂದಿನಿಂದ ಪ್ರತಿವರ್ಷವೂ ಉಳಿತಾಯ ಬ್ಯಾಂಕುಗಳ ಸಂಖ್ಯೆ ಹೆಚ್ಚಾಗುತ್ತ ಬಂದಿದೆ. ಅಕ್ಟೋಬರ್ 1969ರಲ್ಲಿ 80,600 ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ಬ್ಯಾಂಕುಗಳಲ್ಲಿ 750 ಕೋಟಿ ರೂ.ಗಳಿಗೂ ಮೇಲ್ಪಟ್ಟು ಹಣದ ಠೇವಣಿಯಿತ್ತು.

ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳು : 	ಸಾರ್ವಜನಿಕರಿಗೆ ಅನೇಕ ರೀತಿಯ ಸೌಕರ್ಯ ಒದಗಿಸಿ ಉಳಿತಾಯಕ್ಕೆ ಉತ್ತೇಜನ ನೀಡುತ್ತವೆ. ಭಾರತದಲ್ಲಿ ಅಂಚೆ ಕಚೇರಿಗಳಲ್ಲಿ ಕನಿಷ್ಠ ಎರಡು ರೂಪಾಯಿ ಠೇವಣಿಯನ್ನಿಟ್ಟು ಉಳಿತಾಯ ಖಾತೆ ಆರಂಭಿಸಬಹುದು. ಆದರೆ ಜಂಟಿ ಖಾತೆಯಾದರೆ 25,000 ರೂ. ಗಳೂ ಜಂಟಿ ಖಾತೆಯಾದರೆ 50,000 ರೂ. ಗಳೂ ಗರಿಷ್ಠ ಮಿತಿಯಾಗಿರುತ್ತದೆ. ಈ ಠೇವಣಿಗೆ ವರ್ಷಕ್ಕೆ 3 1/2% ಬಡ್ಡಿ ಕೊಡಲಾಗುತ್ತದೆ. ಬಡ್ಡಿಯ ಹಣದ ಮೇಲೆ ವರಮಾನ ತೆರಿಗೆ ವಿಧಿಸುವುದಿಲ್ಲ. ಠೇವಣಿ ಹಣಕ್ಕೆ ಸಂಪತ್ತಿನ ತೆರಿಗೆಯಿಂದ ವಿನಾಯಿತಿಯುಂಟು. ಠೇವಣಿದಾರರಿಗೆ ಈ ಬ್ಯಾಂಕುಗಳು ಸಾಲ ಕೊಡುವ ಪದ್ಧತಿಯಿಲ್ಲ. ಈ ಹಣವನ್ನು ಸರ್ಕಾರವೇ ರಾಷ್ಟ್ರ ನಿರ್ಮಾಣ ಕಾರ್ಯಕ್ಕಾಗಿ ಉಪಯೋಗಿಸಿಕೊಳ್ಳುತ್ತದೆ. ಈಚೆಗೆ ಠೇವಣಿದಾರರಿಗೆ ಚೆಕ್ಕುಗಳ ಸೌಲಭ್ಯ ಒದಗಿಸಲಾಗಿದೆ. ಚೆಕ್ಕುಗಳನ್ನು ಉಪಯೋಗಿಸಬೇಕಾದರೆ ಕನಿಷ್ಠ 50 ರೂ. ಠೇವಣಿ ಇರಬೇಕು.

	ಉಳಿತಾಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳು ನಾನಾ ಬಗೆಯ ಠೇವಣಿ ಯೋಜನೆಗಳನ್ನು ಜಾರಿಗೆ ತಂದಿವೆ.

	ಮಕ್ಕಳಲ್ಲಿ ಉಳಿತಾಯವನ್ನು ಪ್ರೋತ್ಸಾಹಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಂಚೆಕಚೇರಿಗಳಲ್ಲಿ 25 ಪೈಸೆ 50 ಪೈಸೆ ಮತ್ತು ಒಂದು ರೂಪಾಯಿ ಮೌಲ್ಯಗಳ ಉಳಿತಾಯ ಸ್ಟಾಂಪುಗಳು ದೊರಕುತ್ತವೆ. ಈ ಉಳಿತಾಯ ಸ್ಟಾಂಪುಗಳನ್ನು ಕೊಂಡು ಒಂದು ಕಾರ್ಡಿನ ಮೇಲೆ ಹಚ್ಚಿ ಇಟ್ಟು ಕೊಂಡಿದ್ದು ಇವುಗಳ ಮೌಲ್ಯ 5 ರೂ. ಅಥವಾ 10 ರೂ. ಆದಾಗ ಸ್ಟಾಂಪ್ ಕಾರ್ಡನ್ನು ಕೊಟ್ಟು ರಾಷ್ಟ್ರೀಯ ಉಳಿತಾಯ ಪತ್ರ ಕೊಳ್ಳಬಹುದು. ಸಾರ್ವಜನಿಕರು ಉಳಿತಾಯ ಮಾಡುವುದನ್ನು ಪ್ರೋತ್ಸಾಹಿಸಲು ಮತ್ತು ಅದರ ಅನುಕೂಲಗಳನ್ನು ಅವರಿಗೆ ಮನವರಿಕೆ ಮಾಡಲು ರಾಷ್ಟ್ರೀಯ ಉಳಿತಾಯ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.

ವಾಣಿಜ್ಯ ಬ್ಯಾಂಕುಗಳು : 	ಸಣ್ಣ ಉಳಿತಾಯಕ್ಕೆ ಪ್ರೋತ್ಸಾಹ ಕೊಡುವ ಸಲುವಾಗಿ ವಾಣಿಜ್ಯ ಬ್ಯಾಂಕುಗಳಲ್ಲೂ ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಭಾರತದಲ್ಲಿ ಕನಿಷ್ಠ 5 ರೂ. ಠೇವಣಿಯನ್ನಿಟ್ಟು ಈ ಖಾತೆ ತೆರೆಯಬಹುದು. ಚೆಕ್ಕಿನ ಮೂಲಕ ವ್ಯವಹಾರ ಮಾಡುವುದಾದರೆ ಕನಿಷ್ಠ 50 ರೂ. ಠೇವಣಿಯನ್ನಿಟ್ಟಿರಬೇಕು. ಠೇವಣಿಗೆ ಪರಮಾವಧಿ ಮಿತಿ 50,000 ರೂ. ಇದಕ್ಕೂ ಮೀರಿದ ಹಣಕ್ಕೆ ಬಡ್ಡಿ ದೊರೆಯುವುದಿಲ್ಲ. ಠೇವಣಿದಾರರಿಗೆ 3 1/2% ಬಡ್ಡಿ ಕೊಡಲಾಗುತ್ತಿದೆ. ಒಂದು ಸಲಕ್ಕೆ 400 ರೂ.ಗೆ ಮೇಲ್ಪಟ್ಟು ಬಡ್ಡಿ ಪಡೆಯುವುದಾದರೆ ಆ ಹಣಕ್ಕೆ ಆದಾಯ ತೆರಿಗೆ ಕೊಡಬೇಕು. ಠೇವಣಿದಾರರು ಒಂದು ವರ್ಷದಲ್ಲಿ 120 ಸಲಕ್ಕೆ ಮೀರದಂತೆ ಹಣವನ್ನು ಹಿಂತೆಗೆದುಕೊಳ್ಳಲು ಅವಕಾಶವಿದೆ. ಉಳಿತಾಯ ಠೇವಣಿದಾರರಿಗೆ ಠೇವಣಿಯ ಮೇಲೆ ಸಾಲ ದೊರೆಯುವುದಿಲ್ಲ.

ಭವಿಷ್ಯ: ಕಳೆದ ಒಂದೂವರೆ ಶತಮಾನದಲ್ಲಿ ಉಳಿತಾಯ ಬ್ಯಾಂಕುಗಳ ಉದ್ದೇಶ ಮತ್ತು ಕಾರ್ಯಾಚರಣೆಗಳಲ್ಲೂ ಉಳಿತಾಯಮಾಡುವ ವ್ಯಕ್ತಿಗಳ ಉದ್ದೇಶಗಳಲ್ಲೂ ಬದಲಾವಣಿಗಳಾಗಿವೆ. ಪ್ರಾರಂಭದಲ್ಲಿ ಉಳಿತಾಯ ಬ್ಯಾಂಕುಗಳು ಕೇವಲ ಉಪಕಾರ ಮನೋಭಾವದಿಂದ ಸ್ಥಾಪಿತವಾದವು. ಈಗ ಇವು ಲಾಭ ಗಳಿಸುವ ಸಂಸ್ಥೆಗಳಾಗಿವೆ. ಮೊದಲು ಉಳಿತಾಯ ಬ್ಯಾಂಕುಗಳು ಸರ್ಕಾರಕ್ಕೆ ಮಾತ್ರ ಸಾಲ ಕೊಡುತ್ತಿದ್ದವು. ಈಗ ಅನೇಕ ದೇಶಗಳಲ್ಲಿ ಇವು ಉದ್ಯಮ ಸಂಸ್ಥೆಗಳಿಗೂ ಸಾಲ ಕೊಟ್ಟು ಲಾಭಗಳಿಸುತ್ತಿವೆ. ಉಳಿತಾಯ ಮಾಡುವ ಉದ್ದೇಶಗಳಲ್ಲೂ ಅನೇಕ ಬದಲಾವಣೆಗಳಾಗಿವೆ. ಸಾಮಾನ್ಯವಾಗಿ ಭವಿಷ್ಯದಲ್ಲಿ ನಿಶ್ಚಿಂತೆಯಿಂದ ಇರಲು ವ್ಯಕ್ತಿಗಳು ತಮ್ಮ ಆದಾಯದಲ್ಲಿ ಸ್ವಲ್ಪಭಾಗವನ್ನು ಉಳಿತಾಯ ಮಾಡುತ್ತಾರೆ. ಆದರೆ ಈಗ ಅನೇಕ ದೇಶಗಳಲ್ಲಿ ಸರ್ಕಾರವೇ ವ್ಯಕ್ತಿಯ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿರುವುದರಿಂದ ವ್ಯಕ್ತಿಗಳು ತಮ್ಮ ಭವಿಷ್ಯದ ಬಗ್ಗೆ ಅಷ್ಟೇನೂ ಚಿಂತಿಸಬೇಕಾಗಿಲ್ಲ. ಸಾಲ ಸೌಲಭ್ಯ, ಕಂತು ಮಾರಾಟ ಮುಂತಾದವುಗಳ ಬೆಳೆವಣಿಗೆಯಿಂದ ಉಳಿತಾಯದ ಬಗ್ಗೆ ವ್ಯಕ್ತಿಗಳಲ್ಲಿ ಸ್ವಲ್ಪಮಟ್ಟಿನ ಉದಾಸೀನತೆ ಕಂಡು ಬರುತ್ತಿದೆ. ಕೈಯ ರೊಕ್ಕವ ಕೊಂಡು ಕಡದ ಲೆಕ್ಕವನಳಿಸುವ ಮನೋಭಾವವುಳ್ಳವರು ಮಿತವ್ಯಯವೂ ಒಂದು ಸದ್ಗುಣವೆಂದು ನಂಬುವುದಿಲ್ಲ. ಆದರೆ ಭವಿಷ್ಯದ ಬಗ್ಗೆ ಭರವಸೆ ಸಾಧ್ಯವಿಲ್ಲದ ವ್ಯವಸ್ಥೆಗಳಲ್ಲೆಲ್ಲ ವ್ಯಕ್ತಿಗತ ಉಳಿತಾಯದ ಮಹತ್ತ್ವವಿದ್ದೇ ಇರುತ್ತದೆ. ಅರ್ಥವ್ಯವಸ್ಥೆಯ ಬೆನ್ನೆಲುಬಾದ ಬಂಡವಾಳದ ಬೆಳೆವಣಿಗೆಯ ದೃಷ್ಟಿಯಿಂದ ವೈಯಕ್ತಿಕವಾಗಿಯೋ ಸಾಂಸ್ಥಿಕವಾಗಿಯೋ ಉಳಿತಾಯ ಅತ್ಯಗತ್ಯ. ಪಚನಕ್ರಿಯೆಯಿಂದ ಶರೀರದ ಅಂಗಾಂಗಳಿಗೆ ಶಕ್ತಿ ಕೂಡಿಕೊಳ್ಳುವ ತೆರನಾಗಿ ಉಳಿತಾಯವೂ ಒಂದು ಸಹಜ ಪ್ರಕ್ರಿಯೆಯಾಗಿ ಮುಂದುವರಿದೇ ತೀರುತ್ತದೆ.										
   (ಎ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ